1854 - 91. ಪ್ರತಿಭಾವಂತ ಫ್ರೆಂಚ್ ಕವಿ. ಮ್ಯೂಸೆ ನದಿಯ ದಡದಲ್ಲಿರುವ ಚಾರ್ಲೆವಿಲ್ಲೆ ಪಟ್ಟಣದಲ್ಲಿ ಹುಟ್ಟಿದ. ಇವನ ತಾಯಿ ರೈತಕುಟುಂಬದಿಂದ ಬಂದವಳಾಗಿದ್ದು, ಕಠಿಣ ಸ್ವಭಾವದವಳೂ ಎಲ್ಲರ ಮೇಲೆ ಅಧಿಕಾರ ಚಲಾಯಿಸುವಂಥವಳೂ ಆಗಿದ್ದಳು. ಇವನ ತಂದೆ ಸೈನ್ಯದಲ್ಲಿ ಕ್ಯಾಪ್ಟನ್ ಆಗಿದ್ದ. ಸೈನ್ಯದ ಕರ್ತವ್ಯಗಳು ಅವನನ್ನು ಕುಟುಂಬದಿಂದ ಬಹಳಕಾಲ ದೂರವಿರುವಂತೆ ಮಾಡುತ್ತಿದ್ದವು. ಈ ಕಾರಣದಿಂದಾಗಿ ಆತ ಮನೆಗೆ ಹಿಂದಿರುಗಿದಾಗಲೆಲ್ಲ ಹೆಂಡತಿ ಜಗಳವಾಡುತ್ತಿದ್ದಳು. ಅವನಿಗೆ ಹಲವಾರು ಭಾಷೆಗಳು ಚೆನ್ನಾಗಿ ತಿಳಿದಿದ್ದವು. ರಾಬೊ ತನ್ನ ಚಿಕ್ಕವನಿದ್ದಾಗಲೆ ರಾಬೊ ತನ್ನ ತಾಯಿಯ ಸಾಂಪ್ರದಾಯಿಕ ನಿಷ್ಠುರತೆಯ ವಿರುದ್ಧ ಬಂಡೆದಿದ್ದ.

ರಾಬೊಗೆ ಲ್ಯಾಟಿನ್ ಭಾಷೆ ಚೆನ್ನಾಗಿ ಬರುತ್ತಿತ್ತು. ಇವನು ಶಾಲೆಯಲ್ಲಿ ಓದುತ್ತಿದ್ದಾಗಲೇ ಹಲವಾರು ಉತ್ತಮ ಲ್ಯಾಟಿನ್ ಕವಿತೆಗಳನ್ನು ಬರೆದಿದ್ದ. ವಸ್ ಡಿ ಕಾಲೇಜಿನಲ್ಲಿ ಇವು ಪ್ರಕಟವಾಗಿದ್ದವು. ಜುಗರ್ತ ಎಂಬ ಕವಿತೆಯನ್ನು ಗಮನಿಸಿದರೆ ಈತ ವರ್ಜಿಲನ ತಂತ್ರವನ್ನು ಕರಗತಮಾಡಿಕೊಂಡಿದ್ದ ಎಂಬುದು ಸ್ಪಷ್ಟವಾಗುತ್ತದೆ. ಈತ ಕಾಲೇಜ್ ಡಿ ಚಾರ್ಲೇವಿಲ್ಲೆಯಲ್ಲಿ ಓದುತ್ತಿದ್ದಾಗ ಇವನಿಗೆ ಜಾರ್ಜೆಸ್ ಇಜಂಬಾರ್ಡ್ ಎಂಬ ವಿದ್ವಾಂಸ ಉಪಾಧ್ಯಾಯನಾಗಿ ದೊರೆತದ್ದು ಇವನ ಪ್ರತಿಭೆ ಮತ್ತಷ್ಟು ವಿಕಾಸಗೊಳ್ಳಲು ಕಾರಣವಾಯಿತು. ಈ ಹೊತ್ತಿಗಾಗಲೇ ತನ್ನ ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ತೋರುವ ಹಲವಾರು ಕವಿತೆಗಳನ್ನು ಇವನು ರಚಿಸಿದ್ದ. `ನವ್ಯಕಾವ್ಯ`ದ ಪವಾಡಗಳಲ್ಲೊಂದು ಎಂದು ಈಗ ಪರಿಗಣಿತವಾಗಿರುವ ಬಾಟ್ಯೂ ಇವ್ರೆ ಎಂಬ ಕವಿತೆ, ಇವನು ಕೇವಲ ಹದಿನೇಳು ವರ್ಷದವನಾಗಿದ್ದಾಗ ರಚನೆಗೊಂಡಿತು. ಈತ ಅನೇಕ ಬಾರಿ ಮನೆಯಿಂದ ಓಡಿಹೋದ, ಪ್ಯಾರಿಸ್‍ಗೂ ಓಡಿಹೋಗಿದ್ದ. ಅಲ್ಲಿ ಈತ ಕವಿ ವರ್ಲೆನ್‍ನನ್ನು ಭೇಟಿಯಾದ. ವರ್ಲೇನ್ ಇವನನ್ನು ಪ್ಯಾರಿಸ್‍ನ ಸಾಹಿತ್ಯಕ ಚಟುವಟಿಕೆಗಳಿಗೆ ಪರಿಚಯಿಸಿದ. ರಾಬೊ ತನ್ನ ಪ್ರಖರ ಪ್ರತಿಭೆಯಿಂದ ಅಲ್ಲಿನ ಸಾಹಿತಿಗಳನ್ನು ಚಕಿತಗೊಳಿಸಿದ. ಆದರೆ ಇವನ ಜಗಳಗಂಟಿ ಸ್ವಭಾವ ಅವರಿಗೆ ಮುಜುಗರವನ್ನುಂಟುಮಾಡಿತು. ರಾಬೊ ಮತ್ತು ವರ್ಲೇನ್ ಇಬ್ಬರೂ ಒಟ್ಟಿಗೆ ಇಂಗ್ಲೆಂಡ್ ಮತ್ತು ಬೆಲ್ಜಿಯಮ್‍ಗಳಿಗೆ ಭೇಟಿ ನೀಡಿದರು. ತನ್ನ ಸಂಗ ತೊರೆದುಹೋಗಬಹುದೆಂದು ತಿಳಿದಾಗ ವರ್ಲೇನ್ ರಾಬೋನ ಮೇಲೆ ಗುಂಡು ಹಾರಿಸಿದ. ಈ ಕಾರಣಕ್ಕಾಗಿ ಅವನನ್ನು ಜೈಲಿಗೂ ಹಾಕಲಾಯಿತು.

ಹತ್ತೊಂಬತ್ತು ವರ್ಷಗಳಾಗುವ ಹೊತ್ತಿಗೆ ರಾಬೊ ತನ್ನೆಲ್ಲ ಕಾವ್ಯವನ್ನೂ ರಚನೆಮಾಡಿದ್ದ. 1882ರ ಆರಂಭದಲ್ಲಿ ಈತ ಹಲವೆಡೆ ಅಲೆದಾಡಿದ ಅನಂತರ - ಆಗ ಇವನು ಬಹುಭಾಷಾಜ್ಞಾನವನ್ನು ಪಡೆದ - ಏಡನ್‍ನಲ್ಲಿ ಒಂದು ವ್ಯಾಪಾರೀ ಕೆಲಸಕ್ಕೆ ಸೇರಿದ. 1883ರಲ್ಲಿ ರಬಿಸೀನಿಯಕ್ಕೆ ಬಂದು ಒಬ್ಬ ವಾಣಿಜ್ಯೋದ್ಯಮಿಯಾದ. ಅಲ್ಲಿ ಬಹುಭಾಷೆಗಳಲ್ಲಿ ಬಲ್ಲ ಹೆಂಗಸರ ಜನಾನಾವನ್ನು ಇಟ್ಟುಕೊಂಡಿದ್ದ. ಮೊಣಕಾಲಿನ ಮೇಲಿನ ಒಂದು ಹುಣ್ಣು ಇವನನ್ನು ಕುಂಟನನ್ನಾಗಿ ಮಾಡಿತು. ಈ ಸ್ಥಿತಿಯಲ್ಲಿ ಇವನು ಮಾರ್ಸೆಲ್ಸ್‍ಗೆ ಹಿಂದಿರುಗಿದ. ಶಸ್ತ್ರಚಿಕಿತ್ಸೆಯಲ್ಲಿ ಕಾಲನ್ನು ಕತ್ತರಿಸಿ ತೆಗೆದುಹಾಕಲಾಯಿತು. ಅನಂತರ ಈತ ತನ್ನ ಮೂವತ್ತೇಳನೇಯ ವಯಸ್ಸಿನಲ್ಲಿ ನಿಧನನಾದ.

ರಾಬೊನದು ವೈರುಧ್ಯಗಳನ್ನುಳ್ಳ ವ್ಯಕ್ತಿತ್ವ ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಕಾವ್ಯಕ್ಕೆ ವಿದಾಯ ಹೇಳಿದ. ವರ್ಲೇನ್ 1884ರಲ್ಲಿ ರಾಬೊ ಮತ್ತು ಅವನ ಕಾವ್ಯವನ್ನು ಕುರಿತು ಬರೆದ ಗ್ರಂಥ ಫ್ರೆಂಚ್ ಕಾವ್ಯಪ್ರಪಂಚದಲ್ಲಿ ಇವನಿಗೆ ಮಹತ್ತ್ವದ ಸ್ಥಾನ ತಂದುಕೊಟ್ಟಿತು.  ಇವನು ಕಾವ್ಯ ರಚಿಸಿದ್ದು ಕೇವಲ ನಾಲ್ಕುವರ್ಷಗಳು ಮಾತ್ರ. ಈ ಅವಧಿಯಲ್ಲಿ ಇವನ ಕಾವ್ಯ ಹಲವಾರು ಅವಸ್ಥೆಗಳನ್ನು ಹಾದುಹೋಯಿತು. ಇವನ ಆರಂಭದ ಕಾವ್ಯ ತೀಕ್ಷ್ಣ ವ್ಯಂಗ್ಯದಿಂದ ಕೂಡಿ ಜ್ವಲಿಸುವ ಪ್ರತಿಮೆಗಳನ್ನುಳ್ಳದ್ದಾಗಿತ್ತು. ಇವನ ಪ್ರಸಿದ್ಧ ಕವನ ಬಾಟ್ಯೂ ಇವ್ರೆ ಕಡಲನ್ನು ಕುರಿತ ಒಂದು ಸಂಕ್ಷಿಪ್ತ ಮಹಾಕಾವ್ಯವಾಗಿದೆ. ಇದನ್ನು ಬರೆದಾಗ ಇವನು ಸಮುದ್ರವನ್ನು ನೋಡಿಯೇ ಇರಲಿಲ್ಲ. ಆದರೆ ಇದು ಸ್ವೋಪಜ್ಞತೆಯಿಂದ ಕೂಡಿದ ಲಯಗಳು, ಚಕಿತಗೊಳಿಸುವಂಥ ಪ್ರತಿಮೆಗಳು, ಪ್ರಖರ ಕಲ್ಪನೆಗಳಿಂದ ಕೂಡಿದ್ದು ಪ್ರತೀಕವಾದದ (ಸಿಂಬಲಿಸಂ) ಮುನ್ಸೂಚನೆಯುಳ್ಳದ್ದಾಗಿದೆ. 1871ರಲ್ಲಿ ಇವನು ಬರೆದ ಲೆ ಡೆಸರ್ಟ್ ಡಿ ಲ ಅಮೋರ್ ಎಂಬ ಕವಿತೆ ಫ್ರಾಯ್ಡ್ ತನ್ನ ಮನಶ್ಯಾಸ್ತ್ರೀಯ ಸಿದ್ಧಾಂತಗಳನ್ನು ರೂಪಿಸುವುದಕ್ಕಿಂತ ಬಹಳ ಮೊದಲೆ ಮನಶ್ಯಾಸ್ತ್ರಿಯ ತಪ್ಪೊಪ್ಪಿಗೆಗಳ ಅಭಿವ್ಯಕ್ತಿಯಾಗಿದೆ. ಲೆ ಇಲ್ಯೂಮಿನೇಷನ್ಸ್ (1872-73) ಕವನಸಂಕಲದಲ್ಲಿ ಛಂದಸ್ಸಿನಲ್ಲಿರುವ ಪದ್ಯಗಳು ಮತ್ತು ಗದ್ಯಗಂಧಿ ಪದ್ಯಗಳೂ ಇವೆ. ಈ ಪದ್ಯಗಳು ಒಂದು ನವ್ಯದರ್ಶನವನ್ನು ಒಳಗೊಂಡಿದ್ದು ಪ್ರತೀಕವಾದದ ವಿಕಾಸದಲ್ಲಿ ಮುಖ್ಯಪಾತ್ರ ವಹಿಸಿದವು. 1873ರಲ್ಲಿ ಬರೆದ ಉನೆ ಸೆಮ್ಸನ್ ಎನ್ ಎನ್‍ಫರ್ ಎಂಬ ಕವಿತೆ ಉದ್ದೇಶಪೂರ್ವಕವಾಗಿ ಭ್ರಮಾತ್ಮಕ ಪ್ರತಿಮೆಗಳು ಮತ್ತು ತೀಕ್ಷ್ಣ ವ್ಯಂಗ್ಯವನ್ನು ಮಿಶ್ರಣಗೊಳಿಸಲಾದ ಕವಿತೆಯಾಗಿದೆ. ಇದು ವರ್ಲೇನನೊಂದಿಗಿನ ರಾಬೊನ ಸಂಬಂಧವನ್ನೂ ಆಧ್ಯಾತ್ಮಿಕ ಬಂಡಾಯವನ್ನೂ ಅಭಿವ್ಯಕ್ತಿಸುತ್ತದೆ. ದಿ ಗ್ರೀನ್ ಇನ್ (ಅ ಕಾಬರೆ ವರ್ಟ್) ಕವನದಲ್ಲಿ ಸ್ಯಾಂಡ್‍ವಿಚ್ ಮತ್ತು ಬೀರ್ ರೂಪಾಂತರ ಹೊಂದಿ ಪ್ರತೀಕಾತ್ಮಕವಾಗುತ್ತವೆ. ದಿ ಪಿಕರ್ಸ್ ಆಫ್ ಲೈಸ್ (ಲೆ ಚೆರ್‍ಚೂರ್ಸ್) ಕವನದಲ್ಲಿ ಹುಡುಗಿಯೊಬ್ಬಳ ತಲೆಗೂದಲಿನಿಂದ ಹೇನುಗಳನ್ನು ಹೆಕ್ಕಿ ಕುಕ್ಕುತ್ತಿರುವ ಇಬ್ಬರು ಬಿಳಿಯ ಹುಡುಗಿಯರು ಅರಿವಿಗತೀತವಾದ ಶಾಂತಿಗೆ ಪ್ರತೀಕವಾಗುತ್ತಾರೆ.

ಈತನ ಕಾವ್ಯದ 'ಪ್ರತಿಮಾ ವಿನ್ಯಾಸ' ಸಾಂಪ್ರದಾಯಿಕ ಒಪ್ಪಿದ ಮೂಲಗಳಿಂದಷ್ಟೇ ಬಂದದ್ದಾಗಿರದೆ ಕವನದ ಸಂದರ್ಭದಲ್ಲಿಯೇ ಹುಟ್ಟಿದ್ದಾಗಿರುತ್ತದೆ. ಅದು ಕೆಲವುಬಾರಿ ಗ್ರಾಮ್ಯವಾಗಿರುತ್ತದೆ, ಅಶ್ಲೀಲ ಎನ್ನುವಂತಿರುತ್ತದೆ, ಗಾಢ ಪಾಂಡಿತ್ಯವುಳ್ಳದ್ದಾಗಿರುತ್ತದೆ ಅಥವಾ ಪಾರಂಪರಿಕವಾಗಿ ಕಾವ್ಯಾತ್ಮಕವಾಗಿರುತ್ತದೆ; ಕಾವ್ಯಾರ್ಥ ಆಕಸ್ಮಿಕವೆನ್ನುವಂತೆ ಆವಿರ್ಭವಿಸುತ್ತದೆ. ವಾಯೇಜ್ ಟು ದಿ ಎಂಡ್ ಆಫ್ ನೈಟ್ (ವಾಯೇಜ್ ಆಟೌಟ್ ಡಿ ಲನ್ಯೂಟ್) ಎಂಬಂಥ ಕವನಗಳು ಗುರಿ ತಲುಪಲು ಸಾಧ್ಯವೇ ಇಲ್ಲದ ಸ್ಥಿತಿಯ ಅಭಿವ್ಯಕ್ತಿಯಾಗಿವೆ. ಅಲ್ಲಿಯವರೆಗೆ ಯಾವ ಫ್ರೆಂಚ್ ಕವಿಯೂ ಬಳಸದಿದ್ದ ರೀತಿಯ ಭಾಷಾಪ್ರಯೋಗ, ಛಂದಸ್ಸು, ಲಯ ಮತ್ತು ಪ್ರತಿಮಾ ವಿನ್ಯಾಸವನ್ನುಳ್ಳ ಈ ಕವಿತೆ ಒಂದು ಅಪೂರ್ವ ಸೃಷ್ಟಿಯಾಗಿದೆ.

ವ್ಯವಸ್ಥಿವಾದ ಸಂಸ್ಕೃತಿಯೊಂದಿಗೆ ವಿರುದ್ಧಾತ್ಮಕ ಸಂಬಂಧವುಳ್ಳ ಈತನ ಕಾವ್ಯ ಅಲೆಮಾರಿಯ ಕಾವ್ಯ (ಪೊಯಟ್ರಿ ಆಫ್ ಎ ವಾಂಡರರ್). ಇದು ಕಾಲಸಿದ್ಧವಾದ ಪ್ರಚೋದನೆಗಳಿಂದ ಹುಟ್ಟಿದ್ದಾಗಿರದೆ ಅಸಂಪ್ರದಾಯಿಕತೆಯ ಆಚರಣೆಯಾಗಿದೆ. ಆಕಸ್ಮಿಕವಾದದ್ದಾಗಿದೆ. ಪರಂಪರೆ ಮತ್ತು ನವೀನತೆಯ ವಿರುದ್ಧಾತ್ಮಕ ಸಂಬಂಧವನ್ನು ಇದು ಅನ್ವೇಷಿಸುತ್ತದೆ.

ರಾಬೊನಿಂದ ಸೃಷ್ಟಿಗೊಂಡ ಕಾವ್ಯ ಫ್ರೆಂಚ್ ಭಾಷೆಯಷ್ಟೇ ಅಲ್ಲ ಬಹುಶಃ ಪ್ರಪಂಚದ ಯಾವುದೇ ಭಾಷೆಯಲ್ಲಾಗಲಿ ಹಿಂದೆಂದೂ ರಚನೆಗೊಳ್ಳದ ರೀತಿಯದು. ಒಡೆದು ಛಿದ್ರಛಿದ್ರವಾದ ಪ್ರಪಂಚದ ತುಣುಕುಗಳು ಸುಂದರವಾದಂಥವು. ಕುರೂಪವಾದಂಥವು, ಸಹ್ಯವಾದವು. ಅಸಹ್ಯವಾದವು. ಜ್ವಲಿಸುವಂಥವು. ಮಂಕಾದಂಥವು. ಮೃದುವಾದವು, ಒರಟಾದವು, ಪುರಾಣದವು, ವಾಸ್ತವದವು, ವರ್ತಮಾನದವು, ಭೂತದವು- ಒಂದು ಕನಸಿನಂತೆ ಬಗೆಗಿದ್ದ ಕಲ್ಪನೆಯನ್ನೇ ಕ್ರಾಂತಿಕಾರಕವಾಗಿ ಬದಲಾಯಿಸಿತು. ಗಾಟ್ ಫ್ರೀಡ್ ಬೆನ್, ಎಜ್ರಾಪೌಂಡ್. ಎಲಿಯಟ್, ಎಲುವಾರ್ಡ್, ಆಡೆನ್, ಆಲ್‍ಬೆರ್ಟ್ ಮೊದಲಾದವರ ಕಾವ್ಯಕ್ಕೆ ಮುನ್ಸೂಚನೆಯಾಯಿತು. ಪ್ರತಿಭೆಯನ್ನು ಕುರಿತು ರಾಬೊ ಹೀಗೆ ಹೇಳಿದ್ದಾನೆ; "ಬಿರುಗಾಳಿ ಅಪ್ಪಳಿಸುತ್ತದೆ. ಅಪ್ಪಳಿಸಿ ಗೋಡೆಗಳನ್ನು ಬೀಳಿಸುತ್ತದೆ. ಮನೆಗಳ ಸೀಮಾರೇಖೆಯನ್ನು ಅಳಿಸಿಹಾಕಿಬಿಡುತ್ತದೆ. ಸಾಮಾನ್ಯ ವಾಸ್ತವತೆಯನ್ನು ಅಳಿಸಿಹಾಕಿ. ತನ್ನದೇ ವಾಸ್ತವತೆಯನ್ನು ಅದು ಸೃಷ್ಟಿಮಾಡುತ್ತದೆ". ವಸ್ತುವೇ ರೂಪ ಎಂಬ ನವ್ಯದ ತತ್ತ್ವಕ್ಕೆ ಇದೇ ಮೂಲ. ರಾಬೊನನ್ನು ಯೂರೋಪಿಯನ್ ನವ್ಯದ ಆದ್ಯಪ್ರವರ್ತಕನೆಂದು (ಇನ್ನೊಬ್ಬ ಬೋದಿಲೇರ್) ಪರಿಗಣಿಸಲಾಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ